ರಾಘವೇಂದ್ರ ಹೂ ವಾ (ಗರ್ತಿಕೆರೆ ರಾಘಣ್ಣ)
	1935- ತಮ್ಮ ಶ್ರೀಮಂತ ಕಂಠದಿಂದ ಜನಜಾಗೃತಿ ಮೂಡಿಸಿದ ಗಾನಕೋಗಿಲೆ. ಹೂ.ವಾ. ರಾಘವೇಂದ್ರ, ಗರ್ತಿಕೆರೆ ರಾಘಣ್ಣ ಎಂದೇ ಪರಿಚಿತರು. ಹುಟ್ಟಿದ್ದು 1935ರ ನವೆಂಬರ್ 3ರಂದು, ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ. ತಾಯಿ ಮೂಕಾಂಬಿಕಮ್ಮ ತಂದೆ ನಾಗಪ್ಪಯ್ಯ, ಹೊಸನಗರದಲ್ಲಿ ಹೋಟೆಲ್ ನಡೆಸುತ್ತಿದ್ದರು. 

	ತಮ್ಮ ಧಾರ್ಮಿಕ ಆಚರಣೆಗೆ ಅನುಕೂಲವಾಗುವಂತೆ ತಮ್ಮ ಮನೆಯ ಉಪ್ಪರಿಗೆಯಲ್ಲಿ ಶ್ರೀರಾಮ ಮಂದಿರವನ್ನು ನಿರ್ಮಿಸಿ, ನಿತ್ಯ ಭಜನೆ ಹಾಗೂ ಶನಿವಾರ ವಿಶೇಷ ಭಜನೆಗಳನ್ನು, ನವರಾತ್ರಿಗಳಲ್ಲಿ ಎಂಟು ದಿನಗಳ ಬೀದಿ ಉತ್ಸವ ಹಾಗೂ ನವಮಿಯಂದು ರಥೋತ್ಸವಗಳನ್ನು ನಡೆಸುತ್ತಿದ್ದ ನಾಗಪ್ಪಯ್ಯನವರು ಭಗವದ್ಭಕ್ತಿಯ ಜೊತೆಗೆ ಸಾಂಸ್ಕøತಿಕವಾದ ವಾತಾವರಣವನ್ನೇ ಸೃಷ್ಟಿಸಿದರು. ಹೊಸನಗರಕ್ಕೆ ಬರುತ್ತಿದ್ದ ಬಹುತೇಕ ಕಲಾವಿದರಿಗೆ ನಾಗಪ್ಪಯ್ಯನವರ ಸಂಪ್ರದಾಯಶೀಲ ತಾಣ ತಂಗುದಾಣವಾಗಿತ್ತು. ರಾಘಣ್ಣ ಕಣ್ಣುಬಿಟ್ಟು ಸುತ್ತಮುತ್ತ ನೋಡಿದ್ದೇ ಈ ನೋಟವನ್ನು, ಕಲಾವಿದರು ಸೃಷ್ಟಿಸಿದ್ದ ಸಂಗೀತಲೋಕವನ್ನು, ಶಾಲೆಯ ಓದಿಗಿಂತ ಭಜನೆಯೇ ಮೋಜೆನಿಸಿತು. ಮೊದಲ ಪಾಠವೇ ಹೊಸಮನೆ ಶೇಷಗಿರಿರಾಯರಿಂದ ಪ್ರಾರಂಭ. ಹಾರ್ಮೋನಿಯಂ ನುಡಿಸುತ್ತ ಭಜನೆ ಮಾಡುವುದನ್ನು ಕಲಿತರು. ಈ ಸಂಪ್ರದಾಯವೇ ಕಾಯಕವಾಯಿತು. ಹೊಸನಗರದ ನಾಗಪ್ಪಯ್ಯನವರ ಮನೆಗೆ ತಬಲವಾದಕರೂ, ಉತ್ತಮ ಗಾಯಕರೂ, ರಂಗನಟರೂ ಆಗಿದ್ದ ಕೃಷ್ಣಾಚಾರ್ಯರು, ಚಕ್ರಕೋಡಿ ನಾರಾಯಣ ಶಾಸ್ತ್ರಿಗಳು, ಉಡುಪಿ ಪ್ರಭಾಕರರಾಯರು, ಹರಿದಾಸ ಸುಬ್ಬಯ್ಯನವರು, ವಾಗೀಶ ಚನ್ನಬಸಪ್ಪನವರು, ಹರಿದಾಸ ಶೃಂಗೇಶ್ವರ ಶಾಸ್ತ್ರಿಗಳು, ವೃತ್ತಿಯಲ್ಲಿ ಜೀವವಿಮಾ ಏಜೆಂಟರಾಗಿ ಪ್ರವೃತ್ತಿಯಲ್ಲಿ ಗಾಯಕರಾಗಿದ್ದ ಬಿ.ಕೆ.ಎನ್. ಮೂರ್ತಿ ಮತ್ತು ಬೀರೂರು ಮುಂತಾದ ಕಡೆಗಳಿಂದ ಅನೇಕ ಕಲಾವಿದರು ಬಂದು ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ದಾಸರಪದ, ರಂಗಗೀತೆ, ಭಾವಗೀತೆ, ಭಕ್ತಿಗೀತೆ, ಭಜನೆ, ಹರಿಕಥೆ, ಹಾರ್ಮೋನಿಯಂ ವಾದನ ಇವೆಲ್ಲ ಬಾಲಕ ರಾಘಣ್ಣನವರಿಗೆ ಪ್ರಾಥಮಿಕ ಶಿಕ್ಷಣವಾಯಿತು. ಜೊತೆಗೆ ಮನೆಗೆ ಬರುತ್ತಿದ್ದ ಅತಿಥಿ ಕಲಾವಿದರಾದ ಚಕ್ರಕೋಡಿ ನಾರಾಯಣ ಶಾಸ್ತ್ರಿಗಳ ಹಾಡುಗಾರಿಕೆಯ ಶೈಲಿ ರಾಘಣ್ಣನವರಲ್ಲಿ ಬೇರೂರಿತು. ಸುಮಾರು ತಮ್ಮ ಹನ್ನೆರಡನೆಯ ವಯಸ್ಸಿಗೆ ಹಾರ್ಮೋನಿಯಂ ಹಿಡಿದು ಭಜನೆಗೆ ಸಾಥಿಯಾದರು. ಹರಿಕಥೆ ದಾಸರಾಗಿದ್ದ ಸುರಳಿ ಸುಬ್ಬಯ್ಯನವರಿಗೆ ಹಾರ್ಮೋನಿಯಂ ನುಡಿಸಲು ಪ್ರಾರಂಭಿಸಿದ ರಾಘಣ್ಣ ಮುಂದೆ ಹಿಂದೆ ತಿರುಗಿ ನೋಡಲೇ ಇಲ್ಲ. ಆದರೆ ವಿದ್ಯಾಭ್ಯಾಸ ಅಂದಿನ ಫೋರ್ತ್‍ಫಾರಂ ಅಂದರೆ ಇಂದಿನ 8ನೇ ತರಗತಿಗೆ ಇತೀಶ್ರೀಯಾಯಿತು. ತಂದೆ ನಾಗಪ್ಪಯ್ಯನವರ ವ್ಯವಹಾರಿಕ ಒತ್ತಡಗಳೂ, ಏಳೂಬೀಳೂ ಇದಕ್ಕೆ ಕಾರಣವಾದವು. ಅವರ ಹೋಟೆಲ್ ಉದ್ಯಮಕ್ಕೆ ಕುಸಿಯುವ ಹೊತ್ತಿನಲ್ಲಿ ರಾಘಣ್ಣನವರ ತಾಯಿಯ ಅಣ್ಣನವರಾಗಿದ್ದ ರಘುರಾಮ ಅಡಿಗರು ಇವರ ನೆರವಿಗೆ ಬಂದರು. ಹದಿನೈದರ ಹರೆಯದ ರಾಘಣ್ಣ ಹೊಸನಗರ ತಾಲ್ಲೂಕಿನ ರಿಪ್ಪನ್‍ಪೇಟೆ ಸಮೀಪದ ಗರ್ತಿಕೆರೆಯಲ್ಲಿದ್ದ ತಮ್ಮ ಸೋದರಮಾವನವರ ಆಶ್ರಯಕ್ಕೆ ಬಂದು ಸೇರಿದರು. ಗರ್ತಿಕೆರೆಗೆ ಅತಿಥಿಯಾಗಿ ಬಂದ ರಾಘಣ್ಣ ಅಳಿಯನೂ ಆದ. ಸೋದರಮಾವನ ಮಗಳಾಗಿದ್ದ ಮಹಾಲಕ್ಷ್ಮಿ ಇವರ ಕೈಹಿಡಿದಳು. (1956) ಆಗ ರಾಘಣ್ಣನವರಿಗೆ ಇಪ್ಪತ್ತೊಂದು ವರ್ಷ. ಹಾಡೆಲ್ಲ ನಿನಗಿರಲಿ, ಪಾಡೆಲ್ಲ ಎನಗಿರಲಿ ಎಂದ ಮಡದಿ ಮಹಾಲಕ್ಷ್ಮೀ ಅವರ ಜೀವನರಾಗಕ್ಕೆ ಶ್ರುತಿಯಾಗಿ ನಿಂತರು. ನಾಲ್ಕು ಹೆಣ್ಣುಮಕ್ಕಳು, ಎರಡು ಗಂಡು ಮಕ್ಕಳ ತಂದೆಯಾದ ರಾಘಣ್ಣನವರಿಗೆ ಸಂಸಾರವೇನೂ ಸರಾಗವಾಗಲಿಲ್ಲ. ಬಾಲ್ಯದಲ್ಲಿ ತಾವು ಕಲಿತ ಭಜನೆ, ಹಾರ್ಮೋನಿಯಂ ವಾದನ, ಹರಿಕಥೆಗಳೇ ದಾರಿತೋರಿಸಿದವು. ಆದರೂ ಆರ್ಥಿಕ ಮುಗ್ಗಟ್ಟು ಅವರನ್ನು ಎಡೆಬಿಡದೆ ಹಿಂಬಾಲಿಸಿದವು. ಇದರಿಂದ ಪಾರಾಗಲು ರಾಘಣ್ಮ ಹತ್ತಾರು ಕಾಯಕಗಳನ್ನು ಹುಡುಕಿಕೊಂಡರು. ಪಾತ್ರಧಾರಿಗಳಿಗೆ ಬಣ್ಣ ಹಚ್ಚುವುದು, ಹಾರ್ಮೋನಿಯಂ ಸಾಥಿ ನುಡಿಸುವುದು, ಹಾಡು ಕಟ್ಟಿಕೊಡುವುದು, ಕಲಿಸುವುದು, ಹರಿಕಥೆ ಮಾಡುವುದು, ಕೊಳಲು ಸಾಥಿ ನುಡಿಸುವುದು, ಹೀಗೆ ಹತ್ತಾರು ಕೆಲಸಗಳಲ್ಲಿ ದುಡಿದರೂ ಗೇಣು ಹೊಟ್ಟೆ ತುಂಬುವುದು ಕಷ್ಟವಾಗಿ ಕಡೆಗೆ ಸೈಕಲು ರಿಪೇರಿ ಅಂಗಡಿಯನ್ನು ನಡೆಸಿದರು. ಬದುಕಿನ ಯಾವ ಸಂಕಷ್ಟಗಳಿಂದಲೂ ವಿಚಲಿತರಾಗದ ರಾಘಣ್ಣನವರು ಕಾರ್ಯಕ್ರಮದ ನಿಮಿತ್ತವಾಗಿ ಎತ್ತಿನ ಗಾಡಿಯಲ್ಲಿ ಪ್ರಯಾಣಿಸುತ್ತ, ಸೈಕಲಿನಲ್ಲಿ ಹಾರ್ಮೋನಿಯಂ ಕಟ್ಟಿಕೊಂಡು ಸಾಗುತ್ತಾ, ಇವಾವುದೂ ದೊರೆಯದಿದ್ದಾಗ, ಬರಿಗಾಲಿನಲ್ಲಿ ನಡೆದು ಹೆಗಲ ಮೇಲೆ ಹಾರ್ಮೋನಿಯಂ ಪೆಟ್ಟಿಗೆಯನ್ನು ಹೊತ್ತುಕೊಂಡು ಹಳ್ಳಿಹಳ್ಳಿಗಳ ಮೂಲೆ ಮೂಲೆಗಳಲ್ಲಿ ತಮ್ಮ ರಾಗದ ಇಂಪನ್ನು ಸಿಂಪಡಿಸಿದರು. ಪ್ರಚಾರ, ಪ್ರಸಾರ, ಪ್ರತಿಷ್ಠೆಗಳ ಹಂಗು, ಹಮ್ಮಿಲ್ಲದ ರಾಘಣ್ಣ ಗರ್ತಿಕೆರೆಹಳ್ಳಿಗೆ ಪ್ರಚಾರ ತಂದರು. ಗರ್ತಿಕೆರೆ ರಾಘಣ್ಣ ಎಂಬುದೇ ಅವರ ಗೀತನಾಮವಾಯಿತು. ಮಲೆನಾಡಿನ ಕೋಗಿಲೆ ಎಂಬ ಬಿರುದು ಪಡೆದ ರಾಘಣ್ಣ ರಾಜ್ಯಾದಾದ್ಯಂತ ತನ್ನ ಕೊರಳಿನ ಇಂಪನ್ನು ಪಸರಿಸಿದರು.

ಮುಂದೆ ಶಾಂತವೇರಿ ಗೋಪಾಲಗೌಡರಿಂದ ಪ್ರಭಾವಿತರಾಗಿ ಲಾವಣಿಗಳ ಮೂಲಕ ಜನಜಾಗೃತಿ ಮೂಡಿಸುವ ಪ್ರಚಾರದಲ್ಲಿ ತೊಡಗಿದ ರಾಘಣ್ಣ, ಕರ್ನಾಟಕ ರಾಜ್ಯ ಸರ್ಕಾರದ ವಾರ್ತಾ ಇಲಾಖೆ, ವಯಸ್ಕರ ಶಿಕ್ಷಣ ಇಲಾಖೆ, ನೀರಾವರಿ ಯೋಜನೆ ಕುಟುಂಬ ಕಲ್ಯಾಣ ಯೋಜನೆಗಳ ಪ್ರಚಾರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ತಾವೇ ಗೀತೆಗಳನ್ನು ರಚಿಸಿ ಆ ಸಂದರ್ಭಕ್ಕನುಗುಣವಾಗಿ ಹಾಡುವ ಕಲೆಯಲ್ಲಿಯೂ ರಾಘಣ್ಣ ಸಿದ್ಧಹಸ್ತರಾಗಿದ್ದರು. ಆರೋಗ್ಯ ಜಾಗೃತಿ, ಜನಸಂಖ್ಯಾ ಜಾಗೃತಿ, ಪರಿಸರ ಮಾಲಿನ್ಯ ಮೊದಲಾದ ವಿಷಯಗಳ ಬಗೆಗೆ ಹಾಡಿನ ಮೂಲಕ ಪ್ರಚಾರ ನಡೆಸಿದರು. ಮಧ್ಯೆ ಮಧ್ಯೆ ನಾಟಕಗಳಲ್ಲಿಯೂ ತಮ್ಮ ಕೊರಳನ್ನು ನೀಡಿ ಅಲ್ಲಿಯೂ ತಮ್ಮ ಸಾಮಥ್ರ್ಯದಿಂದ ಹೆಸರು ಮಾಡಿದರು. ಗಾಯನ, ಸಂಯೋಜನೆ, ಹಾರ್ಮೋನಿಯಂ ವಾದನದಿಂದ ಪ್ರಾರಂಭವಾದ ರಾಘಣ್ಣ ಬಾಚಿಕೊಂಡಿದ್ದು. ಹಲವಾರು ಬಿರುದುಗಳನ್ನು, ಪ್ರಶಸ್ತಿಗಳನ್ನು. ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ (1991) ಸಂಗೀತನಾಟಕ ಅಕಾಡೆಮಿಯ `ಕಲಾ ತಿಲಕ ಪ್ರಶಸ್ತಿ (1993) ಸುಗಮಸಂಗೀತ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ಸಂತ ಶಿಶುನಾಳ ಶರೀಫ ಪ್ರಶಸ್ತಿ (2003) ತಮ್ಮ ಶ್ರೀಮಂತ ಕಂಠದಿಂದ ಜನಜಾಗೃತಿ ಮೂಡಿಸಿದ ಮಲೆನಾಡ ಕೋಗಿಲೆಗೆ ಲಭಿಸಿವೆ.										
(ಜಯಶ್ರೀ ಅರವಿಂದ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ